Thursday, October 28, 2010

ಕುಕ್ಕೆ ಸುಬ್ರಹ್ಮಣ್ಯ, ನಿನ್ನ ಕಂಡ ಬಾಳು ಧನ್ಯ..

ಕಾನನಗಳಿಂದ ಸಂಪದ್ಭರಿತವಾದ ಗಿರಿಶ್ರೇಣಿಯ ಸುಂದರ ಪ್ರಕೃತಿಯ ಮಡಿಲಿನಲ್ಲಿ ಇರುವ ಪುಣ್ಯಕ್ಷೇತ್ರ ಕುಕ್ಕೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಊರಿನ ಮಧ್ಯಭಾಗದಲ್ಲಿ ಸುಬ್ರಹ್ಮಣ್ಯನ ದೇವರ ದೇವಾಲಯವಿದೆ. ಮಂಗಳೂರಿನಿಂದ ಕೇವಲ 100 ಕಿ.ಮೀಟರ್‌ ದೂರದಲ್ಲಿರುವ ಈ ಸುಂದರ ತಾಣಕ್ಕೆ ಬಸ್‌, ಟ್ಯಾಕ್ಸಿ, ಕಾರುಗಳಲ್ಲಿ ಹೋಗಿಬರಬಹುದು.

2001ರ ಜೂನ್‌ 22ರಂದು ಇಲ್ಲಿ ಹೊಸದಾಗಿ ನಿರ್ಮಿಸಿರುವ ಅಕ್ಷರ ವಸತಿ ಗೃಹದ ಉದ್ಘಾಟನೆಯೂ ಆಗಿದೆ. ಉದ್ದೇಶಿತ ವಸತಿಗೃಹಕ್ಕೆ ಶಂಕುಸ್ಥಾಪನೆಯೂ ನೆರವೇರಿದೆ. ಷಣ್ಮುಖ ಪ್ರಸಾದ ಭೋಜನ ಶಾಲೆಯನ್ನೂ ಉದ್ಘಾಟಿಸಲಾಗಿದೆ. ಭಕ್ತಾದಿಗಳಿಗೆ ಇಲ್ಲಿ ಮೂಲಭೂತ ಸೌಲಭ್ಯಗಳಿಗೆ ಅಂತಹ ತೊಂದರೆ ಏನಿಲ್ಲ.

ಪುರಾಣ : ದುಷ್ಟ ಸಂಹಾರಕ್ಕಾಗಿಯೇ ಹುಟ್ಟಿದ ಶಿವ - ಪಾರ್ವತಿಯರ ಸುತ ಷಣ್ಮುಖ ನೆಲೆಸಿಹ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಮಹತ್ವವಾದದ್ದು. ಗೋಕರ್ಣದಲ್ಲಿ ಶಿವನಾತ್ಮಲಿಂಗ ಭೂಸ್ಪರ್ಶ ಮಾಡಿದರೆ, ಈ ಪುಣ್ಯ ಕ್ಷೇತ್ರದಲ್ಲಿ ಸ್ವತಃ ಸುಬ್ರಹ್ಮಣ್ಯನೇ ನೆಲೆಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ.

ಧಾರಾ ನದಿಯ ದಡದಲ್ಲಿರುವ ಈ ಪುಣ್ಯಕ್ಷೇತ್ರದ ಮಹಿಮೆಯ ಬಗ್ಗೆ ಹಲವಾರು ಕಥೆಗಳಿವೆ. ತಾರಕ ಸಂಹಾರದ ನಂತರ ಸುಬ್ರಹ್ಮಣ್ಯನು ಇಲ್ಲಿಗೆ ಬಂದು ತಾರಕ ಹಾಗೂ ಇನ್ನಿತರ ರಕ್ಕಸರ ರುಂಡವನ್ನು ಚೆಂಡಾಡಿದ ತನ್ನ ಶಕ್ತಿ ಆಯುಧವನ್ನು ಧಾರಾ ನದಿಯಲ್ಲಿ ತೊಳೆದನಂತೆ.

ಕುಮಾರ ಸ್ವಾಮಿ ತನ್ನ ಆಯುಧ ತೊಳೆದ ಈ ನದಿ ಅಂದಿನಿಂದ ಕುಮಾರಧಾರಾ ಎಂದೇ ಹೆಸರಾಗಿದೆ. ತಾರಕಾದಿಗಳೊಂದಿಗೆ ಹೋರಾಡಿ ದಿಗ್ವಿಜಯ ಸಾಧಿಸಿದ ಕುಮಾರ ಸ್ವಾಮಿಯು ತನ್ನ ಸೋದರನಾದ ಗಣೇಶನೊಂದಿಗೆ ಜತೆಗೂಡಿ ಕುಮಾರ ಪರ್ವತ ಶಿಖರಕ್ಕೂ ಬಂದನಂತೆ, ಅಲ್ಲಿ ಇಂದ್ರಾದಿ ದೇವತೆಗಳು ಅವರನ್ನು ಸ್ವಾಗತಿಸಿದರು ಎಂದು ಪುರಾಣ ಸಾರುತ್ತದೆ.

ಮಿಗಿಲಾಗಿ ತಮ್ಮನ್ನು ತಾರಕನ ಕಾಟದಿಂದ ಮುಕ್ತಿಗೊಳಿಸಿದ ಕುಮಾರ ಸ್ವಾಮಿಗೆ ದೇವೇಂದ್ರನು ತನ್ನ ಮಗಳಾದ ದೇವಸೇನಳನ್ನು ಮದುವೆಯಾಗುವಂತೆಯೂ ಪ್ರಾರ್ಥಿಸುತ್ತಾನೆ. ಅದಕ್ಕೆ ಒಪ್ಪಿದ ಷಣ್ಮುಖ ಕುಮಾರಧಾರಾ ನದಿ ತಟದಲ್ಲೇ ಮಾರ್ಗಶಿರ ಶುದ್ಧ ಷಷ್ಠಿಯ ದಿನ ದೇವೇಂದ್ರನ ಕುವರಿಯನ್ನು ವರಿಸುತ್ತಾನೆ. ಇದೇ ಸ್ಥಳದಲ್ಲೇ ವಾಸುಕಿ ಎಂಬ ಸರ್ಪರಾಜನಿಗೂ ಕುಮಾರಸ್ವಾಮಿ ದರ್ಶನ ನೀಡುತ್ತಾನೆ.

ವಾಸುಕಿಯು ತನ್ನೊಂದಿಗೆ ಇದೇ ಸ್ಥಳದಲ್ಲೇ ಶಾಶ್ವತವಾಗಿ ನೆಲೆಸುವಂತೆ ಕುಮಾರ ಸ್ವಾಮಿಯನ್ನು ಪ್ರಾರ್ಥಿಸುತ್ತಾನೆ. ತನ್ನ ಭಕ್ತನ ಕೋರಿಕೆಯನ್ನು ಮನ್ನಸಿ ಸುಬ್ರಹ್ಮಣ್ಯನು ನೆಲೆಸಿಹನೆನ್ನುತ್ತದೆ ಸ್ಥಳ ಪುರಾಣ. ದೇವಾನು ದೇವತೆಗಳೆಲ್ಲರ ಪಾದ ಧೂಳಿನಿಂದ ಪುನೀತವಾಗಿರುವ ಈ ಕ್ಷೇತ್ರದಲ್ಲಿ ಹಾಗೂ ಶಕ್ತಿ ಆಯುಧವನ್ನೇ ತೊಳೆದ ಕುಮಾರ ಧಾರಾದಲ್ಲಿ ಸ್ನಾನ ಮಾಡಿದರೆ ಸಕಲ ಸಂಕಷ್ಟಗಳೂ ಪರಿಹಾರವಾಗುತ್ತವೆ ಎಂಬುದು ಭಕ್ತರ ನಂಬಿಕೆ.

ಇಂದೂ ಶಿಲಾಮೂರ್ತಿಯಾಗಿ ಕುಮಾರಸ್ವಾಮಿಯೇ ತನ್ನ ಸತಿ ದೇವಸೇನೆ ಹಾಗೂ ವಾಸುಕಿಯಾಂದಿಗೆ ಈ ಸ್ಥಳದಲ್ಲಿ ನೆಲೆಸಿಹನೆಂದು ಭಕ್ತರು ಭಾವಿಸುತ್ತಾರೆ. ಪ್ರತಿವರ್ಷ ಮಾರ್ಗಶಿರ ಶುದ್ಧ ಷಷ್ಠಿಯ ದಿನ (ಅಂದರೆ ಕುಮಾರ ಸ್ವಾಮಿಯು ದೇವೇಂದ್ರನ ಕುವರಿಯನ್ನು ಇದೇ ಸ್ಥಳದಲ್ಲಿ ವಿವಾಹವಾದ ಎನ್ನಲಾದ ದಿನ ) ಇಲ್ಲಿ ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ.

ಕುಕ್ಕೆಯ ಇತಿಹಾಸ : ಹಿಂದೆ ಈ ಪವಿತ್ರ ಪುಣ್ಯಸ್ಥಳ ಕುಕ್ಕೆ ಪಟ್ಟಣ ಎಂದು ಕರೆಯಲ್ಪಡುತ್ತಿತ್ತು. ಈ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರೂ ಕೆಲಕಾಲ ತಂಗಿದ್ದರು. ತಮ್ಮ ಕೃತಿಯಲ್ಲಿ ಆದಿ ಶಂಕರರು ಭಜೆ ಕುಕ್ಕೆ ಲಿಂಗಮ್‌ ಎಂದೂ ಬಳಸಿದ್ದಾರೆ. ಸ್ಕಂದ ಪುರಾಣದಲ್ಲಿ ಕೂಡ ಕುಕ್ಕೆ ಕ್ಷೇತ್ರದ ಪ್ರಸ್ತಾಪ ಇದೆ.

ಸುಂದರವಾದ ಪ್ರಾಕಾರ, ರಜತ ಲೇಪಿತ ಗರುಡಗಂಭ, ಸುಂದರವಾದ ಸುಬ್ರಹ್ಮಣ್ಯಮೂರ್ತಿಯುಳ್ಳ ದೇವಾಲಯ ಕೂಡ ಮನಮೋಹಕವಾಗಿದೆ. ಇಂದೂ ಕೂಡ ಸುಬ್ರಹ್ಮಣ್ಯನೊಂದಿಗೆ ಗರ್ಭಗುಡಿಯಲ್ಲಿ ನೆಲೆಸಿಹ ವಾಸುಕಿ (ಸರ್ಪರಾಜ)ಯು ಉಸಿರಾಡುವಾಗ ಹೊರಹೊಮ್ಮುವ ವಿಷದಿಂದ ಜನರನ್ನು ರಕ್ಷಿಸಲೆಂದೇ ಗರುಡ ಇಲ್ಲಿ ಕಂಬವಾಗಿ ನಿಂತಿಹ ಎಂದೂ ಕೆಲವು ಹಿರಿಯರು ಹೇಳುತ್ತಾರೆ.

ಕುಕ್ಕೆ ಲಿಂಗ : ಈ ಕ್ಷೇತ್ರದಲ್ಲಿ ಹಿಂದೆ ಜನರು ಕುಕ್ಕೆಗಳಲ್ಲಿ ಈಶ್ವರ ಲಿಂಗವನ್ನಿಟ್ಟು ಪೂಜಿಸುತ್ತಿದ್ದರಂತೆ ಹೀಗಾಗೆ ಇಲ್ಲಿರುವ ಶಿವಲಿಂಗಕ್ಕೆ ಕುಕ್ಕೆಲಿಂಗ ಎಂದು ಹೆಸರು ಬಂದಿದೆ. ಈ ಕ್ಷೇತ್ರ ಕುಕ್ಕೆ ಪಟ್ಟಣ ಎಂದು ಕರೆಸಿಕೊಳ್ಳು ಅದೇ ಕಾರಣ ಎನ್ನುವುದು ಕೆಲವರ ವಾದ.

ಆದರೆ, ಮತ್ತೆ ಕೆಲವರು ಕುಕ್ಕೆ ಎಂಬ ಹಳೆಗನ್ನಡದ ಪದ ಗುಹೆ ಎಂಬ ಅರ್ಥ ನೀಡುವ ಸಂಸ್ಕೃತದ ಕುಕ್ಷಿ ಎಂಬ ಪದದಿಂದ ಬಂದಿದೆ. ಗುಹೆಯಾಳಗೆ ಶಿವಲಿಂಗ ಇದ್ದುದರಿಂದ ಇದನ್ನು ಕುಕ್ಕೆ ಲಿಂಗ ಎನ್ನುವುದು ಎಂಬುದು ಅವರ ವಾದ. ವಾದ ಪ್ರತಿವಾದಗಳು ಏನೇ ಇರಲಿ, ಭಕ್ತಾದಿಗಳು ನಿತ್ಯವೂ ಕುಕ್ಕೆಲಿಂಗನನ್ನು ಪೂಜಿಸುತ್ತಾರೆ. ಪ್ರತಿವರ್ಷ ಮಕರ ಸಂಕ್ರಮಣದ ದಿನ ಇಲ್ಲಿ ರಥೋತ್ಸವವೂ ನಡೆಯುತ್ತದೆ.

ಮತ್ತೊಂದು ಕಥೆಯ ರೀತ್ಯ ತಾರಕನೇ ಮೊದಲಾದ ರಕ್ಕಸರನ್ನು ಕೊಂದ ಷಣ್ಮುಖನೇ ತನ್ನ ಪಾಪ ಪರಿಹಾರಾರ್ಥವಾಗಿ ಮೂರು ಸ್ಥಳಗಳಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದನಂತೆ. ಆನಂತರ ಋಷಿ ಮುನಿಗಳು ಈ ಸ್ಥಳಗಳಲ್ಲಿ ಮತ್ತಷ್ಟು ಶಿವಲಿಂಗಗನ್ನು ಪ್ರತಿಷ್ಠಾಪಿಸಿದರು ಎಂಬ ಉಲ್ಲೇಖವೂ ಇದೆ.

ಸುಬ್ರಹ್ಮಣ್ಯ ಮಠ : ಈ ಕ್ಷೇತ್ರದಲ್ಲಿ ದೈ ್ವತ ಸಿದ್ಧಾಂತ ಪ್ರತಿಪಾದಕರಾದ ಮಧ್ವಾಚಾರ್ಯರು ಸ್ಥಾಪಿಸಿದ ಮಠವೂ ಇದೆ. ಮಧ್ವಾಚಾರ್ಯರು ಇಲ್ಲಿ ಮಠ ಸ್ಥಾಪಿಸಿ ತಮ್ಮ ಸೋದರ ವಿಷ್ಣುತೀರ್ಥಾಚಾರ್ಯರಿಗೆ ಒಪ್ಪಿಸಿದರು. ಹೀಗಾಗೇ ಈ ಮಠ ವಿಷ್ಣುತೀರ್ಥಾಚಾರ್ಯ ಸಂಸ್ಥಾನ ಎಂದೂ ಕರೆಯಲ್ಪಡುತ್ತಿತ್ತು.

ಶೃಂಗೇರಿ ಮಠ : ಆದಿ ಶಂಕರಾಚಾರ್ಯರೇ ಕೆಲಕಾಲ ತಂಗಿದ್ದ ಈ ಕ್ಷೇತ್ರದ ದೇವಾಲಯದ ಆವರಣಗೋಡೆಯ ಈಶಾನ್ಯ ಭಾಗದಲ್ಲಿ ಶೃಂಗೇರಿ ಮಠವೂ ಇದೆ. ಚಂದ್ರಮೌಳೇಶ್ವರನ ದೇವಾಲಯವೂ ಇಲ್ಲಿದೆ. ದೇವಾಲಯದ ಆಡಳಿತಕ್ಕೊಳಪಟ್ಟ ಈ ಮಠದಲ್ಲಿ ನ ಚಂದ್ರಮೌಳೇಶ್ವರನಿಗೆ ಸದಾ ಪಂಚಪರ್ವ ನಂದಾದೀಪದ ಸೇವೆ ನಡೆಯುತ್ತಲೇ ಇರುತ್ತದೆ.

No comments:

Post a Comment